ವಿಧವೆ ನೀನೆಷ್ಟು ಚೆಲುವೆ
ವಿಧವೆ ಹೇಗೆ ಚೆಲುವೆ ಎಂಬ ಪ್ರಶ್ನೆಯೇ? ತನ್ನ ಜೀವನವೇ ಪ್ರಶ್ನೆಯಾಗಿದ್ದರೂ ಸಹ ತಾನೇ ಸಮಾಧಾನ ಕಂಡುಕೊಳ್ಳುತ್ತ ದಿಟ್ಟ ಹೆಜ್ಜೆಗಳನ್ನು ಇಡುವ ಅವಳಿಗೆ ಧೈರ್ಯವೇ ಆಭರಣ.
ಒತ್ತಾಯಕ್ಕೋ, ಒಪ್ಪಿಗೆಯಿಂದಲೋ ತಾನು ಬೆಳೆದ ಮನೆಯನ್ನು, ಮನೆಯವರನ್ನು ಭಾರ ಹೃದಯದಿಂದಲೇ ತೊರೆಯುತ್ತಾ ಸಪ್ತಪದಿ ಎಂಬ ಸಮುದ್ರದಲ್ಲಿ ಜೊತೆಗಾರನಾದವನ್ನೇ ತನ್ನ ಸರ್ವಸ್ವ ಎಂದು ಆಕೆ ಬಂದಿದ್ದಾಗಿತ್ತು. ಸರ್ವಸ್ವ ಎಂದು ಕೊಂಡ ಗಂಡ ಸರ್ವಾಧಿಕಾರಿಯಾಗಿದ್ರೂ ಸರಿಯೇ ಸಾಧಾ ಮನುಷ್ಯನಾಗಿದ್ದರೂ ಸರಿಯೇ ಜೀವನದ ನೊಗವನ್ನು ಅವನೊಂದಿಗೆ ಸರಿದೂಗಿಸಲು ಹೆಚ್ಚು ಭಾರವಿದ್ದರೂ ಆ ಜೀವನ ಬಂಡಿಯನ್ನು ಸಂಭ್ರಮಿಸುತ್ತ ಆಕೆ ಮುನ್ನಡೆದಿದ್ದಳು. ಹಠಾತ್ತನೆ ಆಕೆಯ ಜೀವನ ಸಂಗಾತಿ ಬಿಟ್ಟು ನಡೆದಾಗ ಆಕೆಯ ಅಕ್ರಂದನದ ಮದ್ಯೆಯೇ ಮದುವೆಯಲ್ಲಿ ಜೊತೆಯಾಗಿದ್ದ ಸಂಬಂಧಿಕರೇ ಅವಳ ಗಂಡನನ್ನು ಅಗ್ನಿಗೆ ಸಮರ್ಪಿಸಿ ನದಿಯಲ್ಲಿ ಭಸ್ಮವನ್ನು ಬಿಟ್ಟು ಬಂದಿದ್ದಾಗಿತ್ತು.
ಎಲ್ಲವನ್ನು ಮರೆತು ಮತ್ತೆ ತನ್ನ ಮಕ್ಕಳಿಗಾಗಿ ಗಂಡನ ಮನೆಯವರಿಗಾಗಿ, ಸಂಬಂಧಿಕರಿಗಾಗಿ ಯಾವುದೇ ಅಪೇಕ್ಷೆ ಇಲ್ಲದೆ ದುಡಿಯುವ ಆಕೆಗೆ ತಾಳ್ಮೆ, ನಿಸ್ವಾರ್ಥತೆಯೇ ಒಡವೆ . ಆಕೆಯ ಮದುವೆಯಲ್ಲಿ ಸಂಭ್ರಮಿಸಿದ ಸಂಬಂಧಿಕರೆಲ್ಲರಿಗೂ ಈಗೀಗ ಆಕೆಯ ಕಂಡರೆ ಏನು ತಾತ್ಸಾರ. ಮುಖ ನೋಡಿ ನಕ್ಕರೆ ಏನೋ ದುಡ್ಡು ಬೆಳ್ಳಿ, ಬಂಗಾರ ಕೇಳಿ ಬಿಡುವಳೋ ಎನ್ನುವಷ್ಟು ಆತಂಕ ಅವರಿಗೆ.ಆದರೆ ಯಾರಿಗೂ ಎಂದಿಗೂ ಕೈ ಚಾಚದೇ ತನ್ನ ತೋಳು ರಟ್ಟೆಗಳಿಗೆ ಶಕ್ತಿ ಕೊಡು ಎಂದು ದೇವರಲ್ಲಿ ಮಾತ್ರ ಕೈಮುಗಿದು ಕೇಳಿದ ಸ್ವಾಭಿಮಾನಿಯವಳು. ಅವಳ ಧ್ವನಿ ಕೇಳಿದರೂ ಮೈಲಿಗೆ ಆಗುವುದೆಂಬ ವಿಚಾರಕ್ಕೆ ತನ್ನ ತಪ್ಪಿಲ್ಲದಿದ್ದರೂ ನರಳಿ ಅಪರಾಧಿಯಂತೆ ಶಿಕ್ಷೆ ಪಡೆದು ವಿಧವೆ ಎಂಬ ಪಟ್ಟದೊಂದಿಗೆ ಕಾಲ ಪಯಣ ಸವೆಸಿದ ಕ್ಷಣಗಳು 25 ವರ್ಷಗಳಾದರೂ ಅವಳ ಎದೆಯಲ್ಲಿ ಮನಸ್ಸಿಗೆ ಆದ ಗಾಯ ಇಂದು ನಿನ್ನಯ ಗಾಯದಂತೆ ಇನ್ನೂ ಹಸಿ ಹಸಿ.
ಹೆಂಡತಿಯನ್ನು ಕಳೆದುಕೊಂಡ ಗಂಡನ ಬಗ್ಗೆ ಜನರಿಗೆ ಕನಿಕರ ಕಾರುಣ್ಯ ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಪಾಲಿಗೆ ಉಳಿಯುವುದು ಕೇವಲ ಅಪಮಾನ ಮಾತ್ರ .ಸಭೆ ಸಮಾರಂಭಗಳಲ್ಲಿ ಎಲ್ಲಾ ರೀತಿಯ ದೈಹಿಕ ಶ್ರಮಗಳನ್ನು ಅವಳಿಗೆ ತಂದಟ್ಟಿ ಆಕೆಯಿಂದ ದುಡಿಸಿಕೊಳ್ಳುವರಾದರು ಸಮಾರಂಭದಲ್ಲಿ ಅವಳನ್ನು ಕರೆಯುವ ಗೊಡವೆ ಯಾರಿಗೂ ಬೇಡ . ಬಾ ಎಂದು ಕರೆದರೂ ಆಕೆ ಬರುವುದಿಲ್ಲ .ತನ್ನ ಸ್ವಂತ ಮಕ್ಕಳ ಸಮಾರಂಭಕ್ಕೂ ಮುಂದೇನಿಲ್ಲದ ಮುಜುಗರ ಅವಳಿಗೆ ಏಕೆಂದರೆ ಅವಳ ಮನಸ್ಸಿನಲ್ಲಿ ಬೆಳೆದ ಅಪಮಾನಗಳ ಮರ ಅಂತಹುದು.
ಏನೇ ಆಗಲಿ
“ತುಂಬು ಸಭೆಯಲ್ಲಿ ಅರಿಶಿನ ಕುಂಕುಮ ಕೊಡದೆ ವಿಧವೆ ಎಂದು ಅವಮಾನಿಸಿದವರ ಮುಂದೆ ನಾನೊಂದು ಮಾನವೀಯತೆ ಒಡವೆ” ಎಂದು ಹುಸಿನಕ್ಕು ಮುಂದೆ ಹೋಗುವ ವಿಧವೆ ನೀನೆಷ್ಟು ಚೆಲುವೆ .
ಲೋಕದ ಆಡಂಬರ ನಿನಗೇಕೆ?
ತಾಳ್ಮೆ, ದೈರ್ಯವೆ ನಿನ್ನ ಒಡವೆ.
ನೀನು ಇತರರಂತೆ ಸಮಾನ ಸುಂದರಳು. ನಿನ್ನ ಸೌಂದರ್ಯ ತಿಳಿಯದ, ಅಪಮಾನ ಮಾಡುವ ಜನ ಅಂತರಂಗದಿಂದ ಮೂರ್ಖರಷ್ಟೆ.
ಈ ಲೇಖನದ ಮೂಲಕ ದೇವರಲ್ಲಿ, ಕೋರಿಕೊಳ್ಳುವುದು
ಹೆಣ್ಣು ಇಂತಹ ಅಪಮಾನ ಸಹಿಸದಂತೆ ಸೌಭಾಗ್ಯವಂತಳಗಿರಲಿ. ಸಮಾಜಕ್ಕೆ
ಕೋರಿಕೊಳ್ಳುವುದು ನಮ್ಮ ನಡೆ
ವೈಧವ್ಯ ಪಡೆದವಳಿಗೆ ಅಪಮಾನ ವಾಗದಂತಿರಲಿ.
ಲೇಖಕರು :- ಅಶ್ವಿನಿ ಹರೀಶ್ ಓಂಕಾರ್ – ಬೆ೦ಗಳೂರು
ಬದಲಾವಣೆಗಳು ನಮ್ಮಿಂದಲೇ ಆಗಬೇಕು, ತಾಯಿ ವಿಧವೆ ಯಾದಾಗ ಅವಳ ನೋವನ್ನು ಕಣ್ಣಾರೆ ಕಂಡ ಮಕ್ಕಳು ಬೇರೆಯರನ್ನು ಅದೇ ಜಾಗದಲ್ಲಿ ಕಂಡಾಗ ಆ ನೋವು ಮತ್ತೆ ಜಾಗೃತವಾಗಿ ಪರಿವರ್ತನೆಗೆ ಕಾರಣರಾಗುತ್ತಾರೆ.