ಲೇಖಕರು : ಶ್ರೀಮತಿ. ದಿವ್ಯ ಸುಜನ್ ಗುಡ್ಡೆ ಮನೆ
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಒಂದು ಕನಸಿರುವುದು, ಅದು ಸುಂದರ ಬದುಕಿನ ಕನಸು, ಜೀವನದುದ್ದಕ್ಕೂ ಸುಖಮಯ, ಸುಂದರ, ಸಹಜತೆಯ ಬದುಕಿನ ಜೀವನ ಪ್ರತಿಯೊಬ್ಬರ ಕನಸು. ಅದನ್ನು ನನಸಾಗಿಸುವುದರಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಬೇಕು. ನನ್ನ ಕನಸಿಗೆ ಅಕ್ಷರದ ಹೂರಣ ಈ ಮಾಲಿಕೆ, ನನ್ನ ಕನಸಿಗೆ ಜೀವ ತುಂಬುವುದು.
ನಾನು ಒಬ್ಬ ಸ್ತ್ರೀ ಎಂಬುದು ನನಗೆ ಹೆಮ್ಮೆಯ ವಿಷಯವಾಗಿದೆ, ಯಾಕೆಂದರೆ ಭಾರತೀಯ ಸಮಾಜದಲ್ಲಿ ಜಗತ್ತಲ್ಲೇ ಸ್ತ್ರೀಗೆ ವಿಶೇಷವಾದ ಪೂಜನೀಯ ಸ್ಥಾನವಿದೆ “ಯತ್ರ ನಾರ್ಯಸ್ತು ರಮಂತೆ ತತ್ರ ದೇವತಾ:” ಅರ್ಥಾತ್ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆಂದು ಭಾರತೀಯರ ನಂಬಿಕೆ, {ಮನಸ್ಮೃತಿಯಲ್ಲಿ ಹೇಳಿದ್ದು} ಹಾಗಾಗಿ ಹೆಣ್ಣಾಗಿ ಹುಟ್ಟಿರುವುದು ನನ್ನ ಪುಣ್ಯವೇ ಸರಿ.
ಈ ನಿಟ್ಟಿನಲ್ಲಿ ಸಮಾಜದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಪ್ರಜಾಸತ್ತಾತ್ಮಕ ವಿಚಾರಗಳ ಬಗ್ಗೆ ನನ್ನ ಕನಸು ಸದಾ ನಸಾಗಲು ಪ್ರತಿ ಹಂತದಲ್ಲೂ ಪ್ರಯತ್ನಿಸುತ್ತ ಇರುವೆನು. ಮನುಷ್ಯ ಜೀವನದ ಉದ್ದೇಶ ಸಾರ್ಥಕತೆಯ ಬದುಕು, ನಾನು ಸಾರ್ಥಕತೆಯ ಬದುಕನ್ನು ಕಟ್ಟಿಕೊಳ್ಳಲು ಕನಸು ಕಂಡಿರುವೆನು. ಆ ಕನಸಿಗೆ ಜೀವ ತುಂಬಲು ಮೌಲ್ಯಗಳ ಉದಾತ್ತ ಚಿಂತನೆಯ ಬೌದ್ಧಿಕತೆ ಮತ್ತು ಕೌಶಲ್ಯದ ಅರಿವು ಸದಾ ಜಾಗೃತವಾಗಿರಬೇಕು.
ನನ್ನ ಕನಸು ನನಸಾಗಲು ಮೊದಲು ನಾನು ಪರಿವರ್ತನೆಗೊಳ್ಳಬೇಕು, ನಾನು ಸರಿಯಾದರೆ ನನ್ನ ಕುಟುಂಬವನ್ನು ಸರಿಪಡಿಸುವಲ್ಲಿ ನಾನು ಸಮರ್ಥಳಾಗಿರುವೆನು. ನನ್ನ ಕುಟುಂಬ ಸರಿಯಾದರೆ ಒಂದು ಸುಂದರ ಪರಿಸರ {ಹಳ್ಳಿ} ಸರಿಪಡಿಸಲು ಪ್ರಯತ್ನಿಸುವೆನು, ಅಂತೆ ಒಂದು ಪರಿಸರ ಸರಿಯಾದರೆ ಒಂದು ಸುಂದರ ಗ್ರಾಮದ ನಿರ್ಮಾಣವಾಗುವುದು. ನನ್ನ ದೇಶವು ಹಳ್ಳಿ ಪ್ರಧಾನವಾದ ದೇಶವಾಗಿದೆ, ಹಾಗೆ ಪ್ರತಿ ಹಳ್ಳಿಗಳು ಮಾರ್ಪಾಡಾದರೆ ದೇಶವೇ ಸುಭಿಕ್ಷ ಗೊಳ್ಳುವುದು ಎಂಬುದು ನನ್ನ ಅಭಿಲಾಷೆ.
ನಾನು ಓದಿ ತಿಳಿದ ಕೆಲವು ವಿಚಾರದಲ್ಲಿ ಇದೊಂದು ಮಾತು ಇಷ್ಟವಾಗಿದ್ದು ಅದೇನೆಂದರೆ “ಸ್ವಸ್ಥ ವ್ಯಕ್ತಿ – ಸ್ವಸ್ಥ ಕುಟುಂಬ – ಸ್ವಸ್ಥ ಗ್ರಾಮ – ಸ್ವಸ್ಥ ದೇಶ” ಇಲ್ಲಿ ಸ್ವಸ್ತ ನಾಗರಿಕರಿಂದಲೇ ಸ್ವಸ್ಥ ಸಮಾಜದ ನಿರ್ಮಾಣ ಮಾಡಲು ಸಾಧ್ಯವಿದೆ ಎಂಬುದು ತಾತ್ಪರ್ಯ.
ಈ ಬಗ್ಗೆ ಚಿಂತನೆ ಮಾಡ ಹೊರಟಾಗ ನನಗನಿಸಿದ್ದು ಮೊದಲು ನನ್ನಿಂದ ಈ ಬದಲಾವಣೆ ಆರಂಭವಾಗಲಿ ಎಂಬುದು, ಹಾಗಾಗಿ ನನ್ನ ಕನಸಿನ ರೂಪುರೇಷೆಗಳನ್ನು ಹೊತ್ತು ಜೀವನದಲ್ಲಿ ಅನುಭವಿಸಿದ ಮತ್ತು ಕನಸುಗಳ ನನಸಿನ ಬಗ್ಗೆ ಬರೆಯುವೆನು.
ಕನಸು ಇನ್ನೂ ಇದೆ ನನಸಾಗುವ ಹಾದಿಯಲ್ಲಿ ಪ್ರಯತ್ನ ಸಾಗುತ್ತಲೇ ಇದೆ.. ನಾನು ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು, ಸರಕಾರಿ ಶಾಲೆಯಲ್ಲಿ ಓದಿ ಬೆಳೆದವಳು. ನಮ್ಮ ಅಪ್ಪ ಅಮ್ಮ ಕಲಿಸಿಕೊಟ್ಟ ಸಂಸ್ಕಾರ ಜೀವನದ ಅರಿವಿನ ಬಗ್ಗೆ ತುಂಬಾ ಅನುಭವ ನೀಡಿದೆ. ಬಾಲ್ಯದ ಜೀವನದಲ್ಲಿ ಕಲಿಯುತ್ತಿರುವಾಗ IAS ಅಧಿಕಾರಿ ಆಗಬೇಕೆಂಬ ಅಭಿಲಾಷೆ ಹೊಂದಿದ್ದ ನಾನು ಶಾಲಾ ದಿನಗಳಲ್ಲಿ ಪ್ರತಿಯೊಂದು ಚಟುವಟಿಕೆಗಳಲ್ಲಿ ಪರಿಪೂರ್ಣವಾಗಿ ಭಾಗವಹಿಸುತ್ತಿದ್ದೆ. ಆಗಿನ ಸಂದರ್ಭದ ಶಿಕ್ಷಣದ ಬಗ್ಗೆ ಹೆಚ್ಚು ಅರಿವಿರದೆ ವಿದ್ಯಾಭ್ಯಾಸದ ಹಾದಿಯು ಬದಲಾಯಿತು.
ಆದರೂ ಮನಸಲ್ಲೊಂದು ದಿಟ್ಟ ನಿರ್ಧಾರವ೦ತೂ ಖ೦ಡಿತಾ ಇತ್ತು ಒಂದಲ್ಲ ಒಂದು ದಿನ ನನ್ನ ಕನಸಿನ ಜೀವನ ಸಾರ್ಥಕ ದಾರಿಯ ಹಿಡಿಯುವುದೆ೦ದು. ಆದರೇನು ಪರಿಸ್ಥಿತಿಗಳು, ಸಾಂಸಾರಿಕ ಜೀವನ ಎಲ್ಲವೂ ಇವುಗಳಿಗೆ ತಡೆಯಾಗಿ ನಿಂತಿದ್ದುವು. ಆದರೂ ನನ್ನ ಮನಸ್ಸು ದೃತಿಗೆಡಲಿಲ್ಲ ಜೀವನದಲ್ಲಿ ಏನನ್ನಾದರೂ ಸಾಧಿಸಿ ಓರ್ವ ನಿಷ್ಠಾವಂತ ಮಹಿಳೆಯಾಗಿ ಸಮಾಜಕ್ಕೆ ಮಾದರಿ ಶಕ್ತಿಯಾಗಿ ಬೆಳೆದು ಇತರರಿಗೆ ಪ್ರೇರಣೆಯಾಗಿ ನಿಲ್ಲಬೇಕು ಎನ್ನುವ ದಿಟ್ಟ ನಿಲುವು ನನ್ನಲ್ಲಿ ಸದಾ ಜಾಗೃತವಾಗಿರುತ್ತಿತ್ತು,
ಇದೇ ಕಾರಣದಿಂದ ಸದಾ ಎಂದಿಗೂ ನಾನು ಕನಸಿನ ಬೆನ್ನೇರಿ ಹೊರಟಿರುವೆನು ಯಶಸ್ವಿಯೂ ಆಗಿರುವೆನು.
ನಾನು ಒತ್ತಡ ಮುಕ್ತವಾದ ಜೀವನಶೈಲಿಯನ್ನು ಇಷ್ಟಪಡುವೆನು, ಸಮಸ್ಯೆಗಳು ಎದುರಾದಾಗ ಪರಿಹಾರಗಳ ಜೊತೆ ಅವುಗಳನ್ನು ತಾಳ್ಮೆಯಿಂದ ಸರಿಪಡಿಸಲು ಪ್ರಯತ್ನಿಸುವೆನು, ಪ್ರತಿಯೊಂದು ಸಮಸ್ಯೆಗಳಿಗೂ …
ಮನಸ್ಥಿತಿ (ಮನಸ್ಸು)
ಮನಿಸ್ಥಿತಿ (ಹಣ)
ಮನೆಸ್ಥಿತಿ (ಮನೆ ವಾತಾವರಣ)
ಇವು ಮುಖ್ಯ ಕಾರಣವಾಗಿದೆ. ಇವು ಸಮತೋಲನದಲ್ಲಿದ್ದರೆ ಎಲ್ಲವೂ ಸರಿಯಾದ ರೀತಿಯಲ್ಲಿ ಬದಲಾವಣೆ ಹೊಂದಲು ಇಲ್ಲವೇ ಪರಿವರ್ತನೆ ಹೊಂದಲು ಸಾಧ್ಯವಿದೆ. ಕನಸುಗಳ ಸಾಕಾರಗೊಳಿಸುವಿಕೆಯ ತವಕದಲ್ಲಿ ನಮ್ಮ ದಿಟ್ಟ ನಿರ್ಧಾರಗಳು ಸದಾ ಜಾಗೃತವಾಗಿರಬೇಕು, ಇದಕ್ಕಾಗಿ ಜೀವನಾನುಭವದ ಅವಶ್ಯಕತೆ ಇದೆ, ಪುಸ್ತಕದ ಬಂಡವಾಳ (ಜ್ಞಾನ) ಜೊತೆಗೆ ಕೌಶಲ್ಯದ ಸೃಜನಶೀಲ ಚಿಂತನೆಗಳು ಇರಬೇಕು. ಪ್ರಸ್ತುತ ಆಧುನಿಕ ಬದುಕಿನಲ್ಲಿ ಹಲವಾರು ಅವಕಾಶಗಳಿವೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿದೆ. ಒಂದು ಫಲ ಕೊಡುವ ಮರ ಸ್ವಚ್ಛಂದವಾಗಿ ಬೆಳೆಯಬೇಕೆಂದರೆ ಅದಕ್ಕೆ ಸಕಾಲದಲ್ಲಿ ನೀರು, ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಅಂತೆಯೇ ನಮ್ಮ ಕನಸಿನ ಬದುಕು ಸಾರ್ಥಕ ಗೊಳಿಸಲು ಆಯ ಹಂತದ ಬೆಳವಣಿಗೆಯಲ್ಲಿ ಬೇಕಾಗುವ ಅವಶ್ಯಕತೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಬೇಕಾದರೆ ಉತ್ತಮ (ಸಾತ್ವಿಕ) ಆಹಾರದ ಸೇವನೆ ಆಗಬೇಕು. ಉತ್ತಮ ಆಹಾರದ ಸೇವನೆಯಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ನಮ್ಮಲ್ಲಿ ಉತ್ತಮ ಚಿಂತನೆಗಳು ಬೆಳೆಯಲು ಸಾಧ್ಯವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗುವಿನಿಂದಲೇ ಪರಿವರ್ತನೆ ಹೊಂದಬೇಕು. ಒಟ್ಟಿನಲ್ಲಿ ಭೂತಕಾಲದ ಅನುಭವದೊಂದಿಗೆ ವರ್ತಮಾನದ ನೈಜತೆಯ ಬೆಳವಣಿಗೆ ಮತ್ತು ಭವಿಷ್ಯದ ಚಿಂತನೆ ಹೊತ್ತ ಕನಸುಗಳೊಂದಿಗೆ ನನ್ನ ಜೀವನ ಉದ್ದೇಶದ ಹಾದಿಯಲ್ಲಿ ಪಯಣಿಸುತ್ತಿರುವೆನು.
ಬದುಕು ಕಲಿಸುವುದು ಪ್ರತಿ ವಿಧವಾದ ಜೀವನಶೈಲಿಯನ್ನು, ಬೇಕು ಬೇಡವೆಂಬುದು ನಮ್ಮ ನಿರ್ಧಾರವಷ್ಟೇ.. ಒಳಿತು ಕೆಡುಕುಗಳ ಸಮತೋಲಿಸಿ ಜೀವನದ ಲೆಕ್ಕಾಚಾರವನ್ನು ಅಳೆದು ತೂಗಿ ಹೊಸ ಹೊಸ ಬದುಕಿನ ಚಿಂತನೆ ಹೊತ್ತು ಸದಾ ಬೆಳಗುವ ದೀಪದಂತೆ ಬೆಳಗುವ ಹಣತೆಯಾಗುವೆನು.. ಜಗಜ್ಯೋತಿಯಾಗುವೆನು.
ನಾನು ಸದಾ ಕನಸು ಕಾಣುವೆನು ಹೊಸ ಹೊಸ ರೂಪದೊಂದಿಗೆ ನನಸಾಗುವ ಪ್ರಯತ್ನದಲ್ಲಿ ಸಾರ್ಥಕತೆಯನ್ನು ಹೊಂದುವೆನು.
ಲೇಖಕರು : ಶ್ರೀಮತಿ. ದಿವ್ಯ ಸುಜನ್ ಗುಡ್ಡೆ ಮನೆ